Untitled Document
Sign Up | Login    
ಕೊರೆವ ದಾರಿಗೆ ತಡೆ ( ಭಾಗ - 02 )

ಮನೆಯಲ್ಲಿ ತಾಯಿ- ತಂದೆ ಇಬ್ಬರು ತಂಗಿಯರು, ಜಯರಾಮ ಒಬ್ಬನೇ ಮಗ. ತೋಟ- ಹಿತ್ತಿಲು ಇದ್ದ ಅವರಿಗೆ ಯಾವುದಕ್ಕೂ ಕಮ್ಮಿಯಿಲ್ಲ. ತಕ್ಕಮಟ್ಟಿಗೆ ಸ್ಥಿತಿವಂತರೇ. ಎಲ್ಲರೂ ತುಂಬ ಆದರದಿಂದ ಕಂಡು ಮಾತನಾಡಿಸಿದರು. ಯೋಗಕ್ಷೇಮ ವಿಚಾರಿಸಿದರು. ಕಿರಿಯ ಸೋದರಿ ಕೃಪಾ ಅಂತೂ ಅರಳು ಹುರಿದಂತೆ ಮಾತಾಡುತ್ತ ಸ್ವಲ್ಪ ಸಮಯದಲ್ಲಿಯೇ ಆಪ್ತಳಾಗಿಬಿಟ್ಟಳು.

ಮಧ್ಯಾಹ್ನ ಊಟದ ನಂತರ ಜಯರಾಮನೊಂದಿಗೆ ಕ್ಯಾಮರಾವನ್ನು ಹೆಗಲಿಗೆ ಹಾಕಿಕೊಂಡು ಕಾಡನ್ನು ಅಂದಾಜಿಸಲು ಹೊರಟ. ಕೃಪಾ ನೀರಿನ ಕ್ಯಾನು ಹಿಡಿದು ಹಿಂಬಾಲಿಸಿದಳು. ಮರಗಳ್ಳರು ಯಾವಾಗ ಮರಕಡಿಯುತ್ತಾರೆ, ಎಲ್ಲೆಲ್ಲಿ ಮರ ಕಡಿದಿದ್ದಾರೆ? ಫಾರೆಸ್ಟ್ ಇಲಾಖೆ ಗುತ್ತಿಗೆ ನೀಡುವದರ ಮೂಲಕ ಕಡಿಸಿದ್ದು ಎಷ್ಟು? ಮೊದಲು ಅರಣ್ಯ ಹೇಗಿತ್ತು? ಈಗ ಹೇಗಿದೆ ? - ಎಂಬುದನ್ನು ಅಂದಾಜಿಸಿ ಪತ್ರಿಕೆಗೆ ಬಿಡುಗಡೆ ಮಾಡಬೇಕಾಗಿತ್ತು. ತನ್ಮೂಲಕ ಹೋರಾಟಕ್ಕೆ ನಾಂದಿ ಹಾಡಬೇಕಾಗಿತ್ತು. ಏನೆಲ್ಲ ಲೆಕ್ಕಾಚಾರ ಹಾಕುತ್ತ ಜಯರಾಮನ ಹಿಂದೆ ಹೇಮಂತ ಹೆಜ್ಜೆಯಿಡುತ್ತಿದ್ದ.

ಮೌನವಾಗಿ ಸ್ವಲ್ಪ ದೂರ ಸಾಗಿದ ಮೇಲೆ ಜಯರಾಮ ಹೇಳಿದ, "ನಾವು ನಾಲ್ಕಾರು ಜನ ಮೊದಮೊದಲು ಪ್ರತಿಭಟನೆ ಮಾಡಿದೆವು. ಕಾಡು ಕಡಿವ ಗೂಂಡಾಗಳಿಂದ ನಮಗೆ ಬೆದರಿಕೆ ಬಂತು. ಮನೆಗಳ ಮೇಲೆ ಕಲ್ಲು ತೂರುವುದು, ಕೊಲೆ ಮಾಡುವುದಾಗಿ ನಮ್ಮ ಜನರನ್ನು ಬೆದರಿಸುವುದು ನಡೆಯಿತು".

ಅಣ್ಣನ ಮಾತಿನ ನಡುವೆಯೇ ಕೃಪಾ ಸೇರಿಸಿದಳು : 'ಅರಣ್ಯವನ್ನು ರಕ್ಷಿಸಬೇಕಾದ ಫಾರೆಸ್ಟ್ ಇಲಾಖೆಯವರೇ ಅವರಿಗೆ ಶಾಮೀಲು. ನಾವು ಬೇಲಿಕಟ್ಟಿಕೊಂಡರೂ ದೊಡ್ಡ ಪ್ರಕರಣ ಮಾಡಿ ಕಿರುಕುಳ ಕೊಡಲಾರಂಭಿಸಿದರು.ಗೊಣವೆ ಅಟ್ಟಕ್ಕೆ ಒಂದು ಚಿಕ್ಕ ಎಳೆ ಹಾಕಿಕೊಂಡರೂ ಜೀಪಿನಲ್ಲಿ ತುಂಬಿಕೊಂಡು ಒಯ್ಯ ಹತ್ತಿದರು. ಏನು ಮಾಡುವುದು?' ಆಕ್ರೋಶ ತುಂಬಿತ್ತು ಅವಳ ಧ್ವನಿಯಲ್ಲಿ.

ತಂಗಿಯ ಮಾತನ್ನು ಪೂರ್ಣಗೊಳಿಸುತ್ತ ಜಯರಾಮ ಹೇಳಿದ: "ಅನಿವಾರ್ಯವಾಗಿ ನಾವು ಹಿಂದೆ ಸರಿಯಬೇಕಾಯಿತು.' ಸಂಜೆಯವರೆಗೂ ಮುಖ್ಯಜಾಗಗಳಲ್ಲೆಲ್ಲ ಅಡ್ಡಾಡಿ ಹೇಮಂತ ಫೋಟೊ ತೆಗೆದ. ಅಗತ್ಯವಾದಲ್ಲಿ ನೋಟ್ ಮಾಡಿಕೊಂಡ. "ಅರಣ್ಯದ ಹೊರಭಾಗವೇ ಇನ್ನೂ ಸ್ವಲ್ಲ ಉಳಿಯಿತು.ಅದನ್ನು ನಾಳೆ ಮುಗಿಸಿದರಾಯಿತು" ಕೃಪಾ ಸೂಚಿಸಿದಳು. ನಂತರ ಉಳಿದದ್ದು ಡಿಸೋಜನ ತಂಡ ಕದ್ದು ಮರ ಕಡಿಯುವ - ಕೊರೆಯುವ ರಹಸ್ಯ ತಾಣಗಳು. ಅವು ಒಳಾರಣ್ಯದ ಸುರಕ್ಷಿತ ಸ್ಥಳದಲ್ಲಿದ್ದವು. ಪೊಲೀಸ್ ನೆರವಿನ ಹೊರತಾಗಿ ಅಲ್ಲಿಗೆ ಹೋಗುವುದು ಅಪಾಯಕಾರಿಯಾಗಿತ್ತು. ಆ ತಾಣಗಳ ದಾರಿಯೂ ಆ ಗ್ಯಾಂಗಿನವರಿಗೆ ಮಾತ್ರ ತಿಳಿದಿತ್ತು. ಆ ಬಗ್ಗೆ ಬೇರೆ ಯಾರಾದರೂ ಪ್ರಯತ್ನಿಸಿದರೆ ಗಂಡಾಂತರ ತಂದುಕೊಳ್ಳಬೇಕಾಗುತ್ತಿತ್ತು. ಅದನ್ನು ಯೋಚಿಸಿಯೇ ಹಿಂದಿರುಗುವಾಗ ಜಯರಾಮ ಹೇಳಿದ : "ನಾಲ್ಕು ದಿನ ತಡವಾದರೂ ಚಿಂತೆಯಿಲ್ಲ. ನಮ್ಮವರ ಕೂದಲೂ ಕೊಂಕಬಾರದು. ಏಟುಕೊಟ್ಟ ಮೇಲೆ ಎದುರಾಳಿ ಏಳುವಂತಿರಬಾರದು. ಅಲ್ಲದೆ ಪ್ರತಿಪಕ್ಷದ ಸಾಮರ್ಥ್ಯವನ್ನು ಎಂದೂ ಕಮ್ಮಿ ಅಂದಾಜಿಸಬಾರದು."

ಮರುದಿನ ಬೆಳಗ್ಗೆ ಚಹ ಕುಡಿಯುವಾಗ ಜಯರಾಮನ ತಂದೆ ಹೇಳಿದರು : "ಹೇಮಂತ, ರಾಮು ಇಂದು ತುರ್ತು ಕೆಲಸದ ನಿಮಿತ್ತ ಯಲ್ಲಾಪುರಕ್ಕೆ ಹೋಗುತ್ತಾನೆ. ನೀನು ವಿಶ್ರಾಂತಿ ತೆಗೆದುಕೊ, ನಾಳೆ ಮುಂದುವರಿಸಿದರಾಯಿತು. ಜಯರಾಮ ಯಲ್ಲಾಪುರಕ್ಕೆ ತೆರಳಿದ ಮೇಲೆ ಸುಮ್ಮನೆ ಕುಳಿತು ಹೇಮಂತನಿಗೆ ಬೇಜಾರಾಯಿತು. ಎದ್ದು ಕ್ಯಾಮರಾ ಹೆಗಲಿಗೆ ಹಾಕಿ, "ನಿನ್ನೆ ಸ್ವಲ್ಪ ಬಾಕಿ ಇಟ್ಟ ಕೆಲಸವನ್ನು ಮುಗಿಸಿಕೊಂಡು ಬರುತ್ತೇನೆ" ಎಂದು ಕಾಡಿನ ಕಡೆಗೆ ಹೊರಟ. ಹೇಮಂತ ಬೇಡವೆಂದರೂ ಕೇಳದರೆ ಜೊತೆಗೆ ಕೃಪಾ ಹೊರಟಳು. ಕಾಡಿನ ಪರಿಚಯ ಸರಿಯಾಗಿಲ್ಲದ ಕಾರಣ ಹೇಮಂತನಿಗೂ ಇದು ಇಷ್ಟವೇ ಆಗಿತ್ತು. ಕೃಪಾಳಿಗಾದರೋ ಹೇಮಂತ ಅಕಸ್ಮಾತ್ ಡಿಸೋಜನ ತಾಣಗಳತ್ತ ಹೋಗಿಬಿಟ್ಟರೆ ಎಂಬ ಭಯ.

ಉದ್ದನೆ ಜಡೆಯ ಗೌರವರ್ಣದ ಚೆಲುವೆ ಕೃಪಾ. ಆಕೆ ಮುಂಧೆ ಮುಂದೆ ಹೋಗುತ್ತಿದ್ದಂತೆ ಆಕೆಯ ಸಹಜ ಸೌಂದರ್ಯವನ್ನು ಕಣ್ಣಿನಲ್ಲಿ ಮನಸ್ಸಿನಲ್ಲಿ ತುಂಬಿಕೊಂಡ. ಮಲ್ಲಿಗೆ ಹೂ ಬಿರಿದಂತೆ ಅವಳ ಪುಷ್ಕಳ ನಗು ಅವನನ್ನು ಎಳೆಎಳೆಯಾಗಿ ಗೊತ್ತಿಲ್ಲದಂತೆ ಬಂಧಿಸುತ್ತಿತ್ತು. ಕಾಡಿನಲ್ಲಿ ಸುಮಾರು ಹೊತ್ತು ಅಲೆದಾಡಿ, ಫೋಟೊ ತೆಗೆದುಕೊಂಡಾಗ ಮೇಲೆ ಒಂದೆಡೆ ನೀರು ಕುಡಿಯಲು ಇಬ್ಬರೂ ಕುಳಿತುಕೊಂಡರು. ಹೇಮಂತನಿಗೆ ನೀರು ಬಗ್ಗಿಸಿಕೊಟ್ಟು ತಾನು ಒಂದೆರಡು ಲೋಟ ಗಟಗಟನೆ ಕುಡಿದು ಕೊಂಚ ಹೊತ್ತು ಕುಳಿತಿದ್ದು "ಬಹಳ ದಣಿದಿದ್ದೀರಿ ವಿಶ್ರಮಿಸಿಕೊಳ್ಳಿ" ಎಂದು ಉಸುರಿ ಕೃಪಾ ಸನಿಹದಲ್ಲೇ ಚೆನ್ನಾಗಿ ಅರಳಿ ನಿಂತ ಕಾಡು ಮಲ್ಲಿಗೆಯನ್ನು ಬಿಡಿಸಿಕೊಳ್ಳತೊಡಗಿದಳು. ಅವಳ ಆಗಿನ ಭಂಗಿ ತುಂಬ ಮೋಹಕವಾಗಿ ಕಂಡಿತು ಹೇಮಂತನಿಗೆ. ಕ್ಯಾಮರಾ ಕಣ್ಣು ಜಾಗೃತವಾಯಿತು. ತಕ್ಷಣ ಅವಳಿಗೆ ಗೊತ್ತಿಲ್ಲದಂತೆ ಸ್ವಲ್ಪ ಹತ್ತಿರಬಂದು ಒಂದೆರಡು ಸ್ನ್ಯಾಪ್ ತೆಗೆದ. ತನ್ನ ಮೇಲೆ ಫ್ಲ್ಯಾಶ್ ಮಿಂಚಿದುದನ್ನು ನೋಡಿ ಕೃಪಾ ಪಕ್ಕನೆ ತಿರುಗಿದಳು. ಒಂದು ಕ್ಷಣ ಅವನ ಕಣ್ಣಿನ ಹೊಳಪಿನಲ್ಲಿ ತನ್ನ ಕಣ್ಣಿನ ಮಿಂಚು ಸೇರಿಹೋದುದನ್ನು ಅನುಭವಿಸಿದಳು. ಮರುಕ್ಷಣ ಸಾವರಿಸಿಕೊಂಡು, "ನಾನು ಮರದ ತುಂಡೂ ಅಲ್ಲ; ಬುಡವೂ ಅಲ್ಲ, ಕಣ್ಣು ಮೋಸ ಮಾಡಿತೋ?" ಎಂದು ಕಿಲಕಿಲನೆ ನಕ್ಕಳು.

"ಕಣ್ಣು ಮೋಸ ಮಾಡಲಿಲ್ಲ. ಮರಗಳ ಜೊತೆಗೆ ಹೂ ಮುಡಿದ ಬಳ್ಳಿಯೂ ಇರಲೆಂದು ಗುಂಡಿ ಅದುಮಿದೆ." ಎಂದು ಮಂದಹಾಸ ಬೀರಿದ ಹೇಮಂತ.

ಅಷ್ಟರಲ್ಲಿ ಸುಂಯ್ಯನೆ ಬಂದ ಕಲ್ಲೊಂದು ರಪ್ಪನೆ ಹೇಮಂತನ ಹಣೆಗೆ ಬಡಿಯಿತು. ಅದರ ಹಿಂದೆಯೇ ಬಂದ ಇನ್ನೊಂದು ಕಲ್ಲು ಅವನ ಬಲಗಾಲಿಗೆ ಹೊಡೆದು ಕೃಪಾಳ ಬಳಿಗೆ ಹೋಗಿಬಿತ್ತು. "ಅಮ್ಮಾ" ಎಂದು ಕೂಗುತ್ತ ಹೇಮಂತ ಪ್ರಜ್ಞೆ ತಪ್ಪಿ ಕೆಳಗುರುಳಿದ. ಕೃಪಾ ಸ್ತಂಭಿತಳಾದಳು. ಹೇಮಂತನ ಹಣೆಯಿಂದ, ಕಾಲಿನಿಂದ ಧಾರಾಕಾರವಾಗಿ ರಕ್ತ ಹರಿಯತೊಡಗಿತು. "ಅಯ್ಯೋ ಯಾರಾದರೂ ಬನ್ನಿ, ಬನ್ನಿ" ಎಂದು ಕೃಪಾ ಕೂಗಿಕೊಂಡಳು.

ನೀರಿನ ಕ್ಯಾನು ತೆರೆದು ಹೇಮಂತನ ತಲೆಗೆ, ಮೈಗೆ, ಕಣ್ಣಿಗೆ ನೀರು ಚಿಮುಕಿಸಿದಳು. ಬಾಯಿಗೊಂದಿಷ್ಟು ಹನಿಸಿದಳು. ಬಾಯ ಕೊನೆಯಿಂದ ನೀರು ಹೊರಚೆಲ್ಲಿದಾಗ ಕೃಪಾ ಹೌಹಾರಿದಳು.

ಹಿಂದಿನಿಂದ ಯಾರೋ ಓಡಿದಂತಾಯಿತು. ಕಾಲುಗೆಜ್ಜೆಯ ದನಿಯಿಂದ ಹೆಣ್ಣಿನ ಹೆಜ್ಜೆಯೆಂದು ಗುರುತಿಸಿದ ಕೃಪಾ ಹಿಂದಿರುಗಿ ನೋಡಿದಳು. ಬಂದವಳಿ ರಾಮ್ ಕಿಶನ್ ನ ಮಗಳು ಚಮೇಲಿ.

"ಕೂಗೋದ್ ಕೇಳತ್ರಿ ಓಡಿ ಬಂದ್ನಿ, ಇವ್ರು ಯಾರಕ್ಕ? ಅಯ್ಯೋ ಪಾಪ.." ಎನ್ನುತ್ತ ತಕ್ಷಣ ತನ್ನ ಲಂಗವನ್ನೇ ಹರಿದು ಹಣೆಗೆ ಕಟ್ಟಿದಳು. ಏನೋ ಒಂದು ತರದ ಸೊಪ್ಪು ಹುಡುಕಿ ತಂದು ಗಾಯದ ಮೇಲೆ ರಸ ಹಿಂಡಿದಳು. ಅಲ್ಪ ಸಮಯದಲ್ಲಿಯೇ ರಕ್ತ ಹರಿಯುವುದು ನಿಂತಿತು. ಎಚ್ಚರ ಮಾತ್ರ ಇನ್ನೂ ಬಂದಿರಲಿಲ್ಲ.

"ಅಕ್ಕ, ಬಾಳ ಹೊತ್ತು ಇಲ್ಲಿ ಇರಬ್ಯಾಡ್ರಿ, ಇಬ್ಬರು ಸೇರಿ ಹೊತ್ಕೊಂಡ್ ಹೋಗಿ ದವಾಖಾನಿಗ್ ಸೇರ್ಸೋಣು, ಆಮ್ಯಾಕ್ ನಾ ಹೋಗ್ತೀನ್ರೀ. ಡಿಸೋಜನ ಎಂಜಲು ತಿನ್ನೋ ಲಂಬೂ ಬಸಪ್ಪಾರಿ. ಈಕಡಿಂದ ಓಡಿ ಹೋಗ್ತಿದ್ದ. ಅವನದೇ ಕೆಲಸಾರಿ. ನಾ ಕಟ್ಗಿ ತರಾಕ್ ಬಂದಿದ್ನಿ. ಚಲೋ ಆತು" ಎಂದು ಹೇಳುತ್ತಲೇ ಎರಡೂ ಕೈಗಳಿಂದ ಹೇಮಂತನ ತಲೆಯ ಬದಿಗೆ ಎತ್ತಿಕೊಂಡಳು. ಕೃಪಾ ಕಾಲಿನ ಬದಿ ಹಿಡಿದಳು. ಸ್ವಲ್ಪ ದೂರ ಹೋಗುವಷ್ಟರಲ್ಲಿ ದನ ಕಾಯುವ ಹುಡುಗರ ಕಂಡರು. ಚಮೇಲಿ ಕೂಗಿ ಕರೆದಳು. ಅವರು ಓಡಿ ಬಂದರು. ಹೇಮಂತ ಒಮ್ಮೆ ಮೆಲ್ಲನೆ ಕಣ್ಣು ತೆರೆದು ಪುನಃ ಕಣ್ಣು ಮುಚ್ಚಿಕೊಂಡ. ಚಮೇಲಿ, ಕೃಪಾ ಸಮಾಧಾನದ ನಿಟ್ಟಿಸಿರಿಟ್ಟರು. "ದವಾಖಾನಿಗ್ ಸೇರ್ಸಿ ಚಲೋ ನೋಡ್ಕಳ್ರೀ" ಎಂದು ಅಲ್ಲಿಂದಲೇ ಹಿಂತಿರುಗಿದಳು ಚಮೇಲಿ. ಕಾಲವಲ್ಲದ ಕಾಲದಲ್ಲಿ ಡಿಸೋಜನ ನಿಷ್ಠುರ ಕಟ್ಟಿಕೊಳ್ಳುವುದು ಆಕೆಗೆ ಬೇಕಾಗಿರಲಿಲ್ಲ. ಕೃಪಾ ಹುಡುಗರ ಸಹಾಯದಿಂದ ಹೇಮಂತನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದಳು.

Name : ವನರಾಗ ಶರ್ಮಾ ವನರಾಗ ಶರ್ಮಾ
Mobile no : -
Write Comments
*Name :
*Comment :
(Max.1000 Characters)
  
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited